ಎಲ್ಲೋರ: ಮಹಾರಾಷ್ಟ್ರದಲ್ಲಿ ಗೋದಾವರಿಯ ಉಪನದಿಯೊಂದರ ದಂಡೆಯ ಮೇಲೆ, ಅಜಂತದಿಂದ ನೈರುತ್ಯದಲ್ಲಿ 46ಕಿಮೀ ದೂರದಲ್ಲೂ ಔರಂಗಾಬಾದಿನಿಂದ ವಾಯವ್ಯ ದಲ್ಲಿ ಸು.26ಕಿಮೀ ದೂರದಲ್ಲೂ ಇರುವ ಪ್ರಸಿದ್ಧ ಸ್ಥಳ. ಬೌದ್ಧ, ಹಿಂದು ಮತ್ತು ಜೈನ ಧರ್ಮಗಳಿಗೆ ಸೇರಿದ 34 ಗುಹೆಗಳೂ ಒಂದೇ ಕಲ್ಲಿನಲ್ಲಿ ಕಡೆಯಲಾಗಿರುವ ದ್ರಾವಿಡ ಶೈಲಿಯ ಸುಪ್ರಸಿದ್ದ ಕೈಲಾಸ ದೇವಾಲಯವೂ ಇರುವ ಈ ಊರು ಭಾರತೀಯ ಕಲೆಯ ಮುಖ್ಯ ಕೇಂದ್ರಗಳಲ್ಲೊಂದಾಗಿದೆ. ಇಲ್ಲಿನ ಇಳಿಜಾರಾದ ಬೆಟ್ಟದ ಪಶ್ಚಿಮದ ಅಂಚಿನಲ್ಲಿ ಕಡೆದಿರುವ ಗುಹಾಂತರ ದೇವಾಲಯಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು. ದಕ್ಷಿಣದಲ್ಲಿರುವ 12 ಗುಹೆಗಳು ಬೌದ್ಧಧರ್ಮಕ್ಕೂ ಮಧ್ಯದ 17 ಗುಹೆಗಳು ಹಿಂದು ಧರ್ಮಕ್ಕೂ ಉತ್ತರದ ಅಂಚಿನ 5 ಗುಹೆಗಳು ಜೈನಧರ್ಮಕ್ಕೂ ಸೇರುತ್ತವೆ.

350-650ರ ಮಧ್ಯದಲ್ಲಿ ನಿರ್ಮಿತವಾದ ಬೌದ್ಧ ಚೈತ್ಯವಿಹಾರಗಳಲ್ಲಿ ಎರಡು ಗುಂಪು ಗಳಿದ್ದು ಮೊದಲ 5 ಗುಹೆಗಳು ದೇರ್ವಾರ ಗುಂಪಿಗೂ ಉಳಿದ 7 ಎರಡನೆಯ ಗುಂಪಿಗೂ ಸೇರುತ್ತವೆ. ಮೊದಲ ಗುಂಪಿನ ಗುಹೆಗಳಲ್ಲಿ ಮಹಾನ್ ವಾಡ ಎಂಬ ಕಂಬಗಳಿಂದ ಕೂಡಿದ್ದ ವಿಶಾಲ ಹಜಾರವನ್ನು ಪ್ರಾರ್ಥನಾ ಮಂದಿರವಾಗಿ ಬಳಸುತ್ತಿದ್ದರು. ಎರಡನೆಯ ಗುಂಪಿನ ಚೈತ್ಯ ಮಂದಿರದಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಈ ಎಲ್ಲ ಗುಹೆಗಳು ಒಂದಂತಸ್ತಿನವುಗಳಾಗಿದ್ದು ಕೈಸಾಲೆ, ಕಂಬಗಳಿಂದ ಕೂಡಿದ್ದ ಹಜಾರ ಮತ್ತು ಚೈತ್ಯ ಅಥವಾ ಗರ್ಭಗುಡಿಯ ನ್ನೊಳಗೊಂಡಿ ರುತ್ತಿದ್ದವು. ಎರಡನೆಯ ಗುಂಪಿನ ಬೌದ್ಧ ಗುಹೆಗಳಲ್ಲಿ ವಿಶಾಲವಾದ ವಿಹಾರಗಳಿದ್ದು ಸುಂದರ ಚೈತ್ಯಗಳೂ ಇರುತ್ತಿದ್ದುವು. ಮುಂಭಾಗದಲ್ಲಿ ದೊಡ್ಡ ಪ್ರಾಂಗಣಗಳಿರುತ್ತಿದ್ದವು. ಅವುಗಳಲ್ಲಿ 3 ಗುಹೆಗಳು ಮೂರಂತಸ್ತಿನ ನಿರ್ಮಾಣಗಳಾಗಿವೆ. ತೀನ್ ತಲ್ ಅಥವಾ ಮೂರಂತಸ್ತಿನ ಭವನವೆಂದು ಹೆಸರಾದ 12ನೆಯ ಗುಹೆ ಗಮನಾರ್ಹವಾಗಿದೆ. ಸು. 40 ಭಿಕ್ಷುಗಳ ವಸತಿಗೆ ಅನುಕೂಲವಿರುವ ಈ ಗುಹೆಯ ಹಜಾರ ಇನ್ನೂ ಅಧಿಕ ಸಂಖ್ಯೆಯ ಭಿಕ್ಷುಗಳು ಪ್ರಾರ್ಥನೆ ಧರ್ಮೋಪದೇಶಗಳಿಗಾಗಿ ಸೇರಲನುಕೂಲವಾಗಿತ್ತು. ಚ್ಯೆತ್ಯಗೃಹದಲ್ಲಿ ಕುಳಿತಿರುವ ಬುದ್ಧ ಮತ್ತು ಇತರ ಮೂರ್ತಿಗಳಿವೆ. ಬೌದ್ಧ ಗುಹೆಗಳಲ್ಲೊಂದಾದ ವಿಶ್ವಕರ್ಮ (10ನೆಯದು) ಗುಹೆ ಸಮಕಾಲೀನ ಅಜಂತದ ಚೈತ್ಯವಿಹಾರಗಳನ್ನು ಹೋಲುತ್ತದೆ.

7ನೆಯ ಶತಮಾನದ ಅಂತ್ಯ ಮತ್ತು 8ನೆಯ ಶತಮಾನಗಳಲ್ಲಿ ಬೌದ್ಧ ಧರ್ಮ ಕ್ಷೀಣಿಸುತ್ತಿದ್ದಾಗ ಹಿಂದುಗಳ ಕಾರ್ಯರಂಗ ಇಲ್ಲಿ ಬೆಳೆಯಲಾರಂಭಿಸಿತು. ಬೌದ್ಧ ವಾಸ್ತುಶಿಲ್ಪಗಳ ಮಾದರಿಯಲ್ಲೇ ಆದರೂ ತಮ್ಮ ಸಂಪ್ರದಾಯಕ್ಕನುಸಾರವಾಗಿ ಮಾರ್ಪಡಿಸಿಕೊಂಡ ಈ ಗುಹೆಗಳಲ್ಲಿ 14ನೆಯ ರಾವಣ್-ಕಾ-ಖಾಇ, 15ನೆಯ ದಶಾವತಾರ, 16ನೆಯ ಕೈಲಾಸ, 21ನೆಯ ರಾಮೇಶ್ವರ ಮತ್ತು 29ನೆಯ ದುಮಾರ್ ಲೇನಾ ಅಥವಾ ಸೀತೆಯ ಸ್ನಾನದ ಗುಹೆಗಳು ಮುಖ್ಯವಾದುವು. ಕ್ರಮಾಗತವಾಗಿ ಬದಲಾವಣೆ ಹೊಂದುತ್ತಿದ್ದ ಈ ಗುಹಾಶೈಲಿಗಳಲ್ಲಿ ಮೊದಲನೆಯ ಗುಂಪಿಗೆ ಸೇರುವ ದಶಾವತಾರ ಗುಹೆ ಬೌದ್ಧ ಗುಹೆಗಳನ್ನು ಹೋಲುತ್ತದೆ. ಪ್ರದಕ್ಷಿಣ ಪಥವಿರುವ ರಾಮೇಶ್ವರ ಮತ್ತು ರಾವಣ್-ಕಾ-ಖಾಇ ಎರಡನೆಯ ಹಂತವನ್ನೂ ಶಿಲುಬೆಯಾಕೃತಿಯ ತಳಕಟ್ಟಿನ ಮಧ್ಯದಲ್ಲಿ ಗರ್ಭಗುಡಿಯಿರುವ ಮತ್ತು ಒಂದಕ್ಕಿಂತಲೂ ಹೆಚ್ಚು ಪ್ರವೇಶದ್ವಾರಗಳಿರುವ ದುಮಾರ್ಲೇನಾ ಗುಹೆ ಮೂರನೆಯ ಹಂತವನ್ನೂ ಕೊನೆಯದಾಗಿ ಗುಹೆಯ ಬದಲು ಕಟ್ಟಿದ ಭವನವನ್ನು ಹೋಲುವ, ಒಂದೇ ಕಲ್ಲಿನಲ್ಲಿ ಕೊರೆಯಲಾದ ಕೈಲಾಸ ದೇವಾಲಯ ನಾಲ್ಕನೆಯ ಹಂತವನ್ನೂ ಸೂಚಿಸುತ್ತವೆ. ರಾವಣ್-ಕಾ-ಖಾಇ ಗುಹೆಯ ದಕ್ಷಿಣದ ಗೋಡೆಯ ಮೇಲೆ ಮಹಿಷಾಸುರಮರ್ದಿನಿ, ತಾಂಡವನೃತ್ಯ ಮಗ್ನಶಿವ, ಕೈಲಾಸಪರ್ವತವನ್ನೆತ್ತುತ್ತಿರುವ ರಾವಣ, ಪಗಡೆಯಾಟದಲ್ಲಿ ತೊಡಗಿರುವ ಶಿವ ಪಾರ್ವತಿ ಮುಂತಾದ ಸುಂದರ ಶೈವಶಿಲ್ಪಗಳೂ ಉತ್ತರದ ಗೋಡೆಯ ಮೇಲೆ ದುರ್ಗೆ, ಲಕ್ಷ್ಮಿ, ವರಾಹ, ಲಕ್ಷ್ಮೀನಾರಾಯಣ ಮುಂತಾದ ವೈಷ್ಣವಶಿಲ್ಪಗಳೂ ಇವೆ. ಹೊರ ಭಾಗದಲ್ಲಿ ಗಣಪತಿ, ಸಪ್ತಮಾತೃಕೆಯರ ಶಿಲ್ಪಗಳಿವೆ. ದಶಾವತಾರ ಗುಹೆಯಲ್ಲೂ ಅನೇಕ ಉತ್ತಮ ದೇವತಾ ಮೂರ್ತಿಗಳನ್ನು ಕಡೆಯಲಾಗಿದೆ. 

ಇಲ್ಲಿನ ಹಿಂದು ದೇವಾಲಯಗಳಲ್ಲೆಲ್ಲ ಅಮೋಘವಾದುದು ರಾಷ್ಟ್ರಕೂಟ ದೊರೆ ಒಂದನೆಯ ಕೃಷ್ಣನ (756-75) ಆಶ್ರಯದಲ್ಲಿ ನಿರ್ಮಿಸಲ್ಪಟ್ಟು ಶಿವನ ವಾಸಸ್ಥಾನವಾದ ಕೈಲಾಸಪರ್ವತದ ಪ್ರತೀಕವಾಗಿ ಒಂದೇ ಶಿಲೆಯಲ್ಲಿ ಕಡೆಯಲಾಗಿರುವ ಕೈಲಾಸ ದೇವಾಲಯ. ಇದನ್ನು ಅತ್ಯಮೋಘವಾದ ಧಾರ್ಮಿಕ ಸಾಧನೆಯೆಂದೂ ಮಾನವನ ಮನಸ್ಸು ಹೃದಯ ಮತ್ತು ಕರಗಳು ಒಂದು ಉದಾತ್ತ ಧ್ಯೇಯ ಸಾಧನೆಗೆ ಒಮ್ಮುಖವಾಗಿ ಶ್ರಮಿಸಿರುವುದರ ನಿದರ್ಶನವೆಂದೂ ಪರ್ಸಿಬ್ರೌನ್ ಶ್ಲಾಘಿಸಿದ್ದಾನೆ. 7.5ಮೀ ಎತ್ತರದ ಜಗತಿಯ ಮೇಲೆ ಇರುವ 45´30ಮೀ ವಿಶಾಲವಾದ ಈ ಮಂದಿರ ಆನೆ ಮತ್ತು ಸಿಂಹಗಳ ಸಾಲುಗಳಿಂದ ಲಂಕೃತವಾಗಿದೆ. ಎರಡಂತಸ್ತಿನ ಗುಡಿಗೆ ಸೇರಿದಂತೆ ಸಣ್ಣ ದೇವತಾ ಗೃಹಗಳೂ ವಿಹಾರಗಳೂ ಇದ್ದು ಹೊರಭಾಗದ ಮಹಾದ್ವಾರದೊಂದಿಗೆ ಕಲ್ಲಿನ ಸೇತುವೆಯ ಮೂಲಕ ಸಂಪರ್ಕ ಪಡೆದಿದೆ. 95 ಅಡಿಗಳೆತ್ತರದ ಈ ದೇವಾಲಯದ ವಿಮಾನದಲ್ಲಿ ಮೂರಂತಸ್ತುಗಳಿವೆ. ಗೋಡೆಗಳ ಮೇಲೆ ರಾಮಾಯಣದ ದೃಶ್ಯಗಳನ್ನು ಕೆತ್ತಲಾಗಿದೆ. ಮುಂಭಾಗದಲ್ಲಿ 15ಮೀ ಎತ್ತರದಲ್ಲಿ ನಂದಿ ಮಂಟಪವೂ ಅದರ ಇಕ್ಕೆಲಗಳಲ್ಲಿ ಧ್ವಜಸ್ತಂಭಗಳೂ ನಿರ್ಮಿತವಾಗಿವೆ. ಕೈಲಾಸ ದೇವಾಲಯದಿಂದ ಉತ್ತರಕ್ಕೆ 2.4ಕಿಮೀ ದೂರದಲ್ಲಿರುವ, ಪ್ರಾಯಶಃ 9ನೆಯ ಶತಮಾನದಲ್ಲಿ ನಿರ್ಮಾಣವಾದ 5 ಜೈನಗುಹೆಗಳಲ್ಲಿ ಮುಖ್ಯವಾದುವು ಇಂದ್ರ ಸಭಾ ಮತ್ತು ಜಗನ್ನಾಥ ಗುಹೆಗಳು.   (ಬಿ.ಕೆ.ಜಿ.;ಕೆ.ಎಸ್.ಎಸ್.)

ಎಲ್ಲೋರದ ಮೂರ್ತಿಶಿಲ್ಪ
ಚಿತ್ರಕಲೆಗೆ ಅಜಂತದಂತೆ, ಶಿಲ್ಪಕಲೆಗೆ ಎಲ್ಲೋರ ಪ್ರಸಿದ್ಧವಾಗಿದೆ. ಬೌದ್ಧ ಗುಹೆಗಳೆಲ್ಲ (1 ರಿಂದ 12) ಮಹಾಯಾನ ಪಂಥಕ್ಕೆ ಸೇರಿದವಾಗಿರುವುದರಿಂದ ವಿವಿಧ ಭಂಗಿಗಳಲ್ಲಿರುವ ವಿವಿಧ ರೀತಿಯ ಬುದ್ಧ ಪ್ರತಿಮೆಗಳು ಇಲ್ಲಿ ಕಾಣಸಿಗುತ್ತವೆ. ಇವುಗಳಲ್ಲಿ ಹತ್ತನೆಯ (ವಿಶ್ವಕರ್ಮ) ಗುಹೆ ಬಿಟ್ಟು ಮಿಕ್ಕೆಲ್ಲವೂ ವಿಹಾರಗಳಾದರೂ ಸಮಕಾಲೀನ ವಾಸ್ತು ಪದ್ಧತಿಯಲ್ಲಿ ರೂಢವಾಗಿದ್ದಂತೆ, ಬುದ್ಧಮೂರ್ತಿಗಾಗಿಯೇ ಒಂದು ವಿಶೇಷ ಗರ್ಭಗೃಹವಿರುತ್ತದೆ. ಅಲ್ಲದೆ ಹಜಾರದ ಭಿತ್ತಿಗಳ ಮೇಲೆ ವಿಶಾಲ ಸ್ಥಳ ದೊರಕಿದಲ್ಲಿ ಬುದ್ಧ ಮತ್ತು ಇತರ ಬೌದ್ಧ ಪರಿವಾರ ದೇವತೆಗಳನ್ನು ಕೆತ್ತಲು ಉಪಯೋಗಿಸಿಕೊಂಡಿರುವುದು ಇಲ್ಲಿಯ ವೈಶಿಷ್ಟ್ಯ. ಈ ಗುಹೆಗಳು ಸಾಮಾನ್ಯವಾಗಿ ಮಹಾಯಾನ ಪಂಥದವುಗಳೆಂದು ಪ್ರಸಿದ್ಧವಾಗಿದ್ದರೂ ಇಲ್ಲಿಯ ಶಿಲ್ಪಗಳಲ್ಲಿ ಈ ಪಂಥದಿಂದಲೇ ಕ್ರಮೇಣ ಬೆಳೆದ ತಂತ್ರಯಾನ ಪಂಥದಿಂದ ವಿಶೇಷವಾಗಿ ಪ್ರಚಲಿತಗೊಂಡ ಬೌದ್ಧ ಪರಿವಾರ ದೇವತೆಗಳೂ ಬಹುವಾಗಿರುವುದು ಗಮನಾರ್ಹ. ಕೆಲವು ರೀತಿಯ ಬುದ್ಧ ಮೂರ್ತಿಗಳಲ್ಲದೆ, ವಿವಿಧ ಅವಲೋಕಿತೇಶ್ವರ (ಮಂಜುಶ್ರೀ) ಮತ್ತು ಶಕ್ತಿದೇವತೆಗಳೂ ಇಲ್ಲಿವೆ. ಇವುಗಳಲ್ಲಿ ಅನೇಕ ಗುಹೆಗಳಲ್ಲಿ ಕಾಣಬರುವ ಷಡಕ್ಷರೀ ಲೋಕೇಶ್ವರ, ರಕ್ತಲೋಕೇಶ್ವರ, ಲೋಕನಾಥ, ಸ್ಥಿರಚಕ್ರ, ಸಿದ್ಧೈಕವೀರ, ವಜ್ರಪಾಣಿ, ಜ್ಞಾನಕೇತು, ಜಂಭಲ, ತಾರಾ, ಪಾಂಡಾರಾ, ಜಾಂಗುಲೀ, ವಸುಧಾರಾ ಚುಂಡಾ, ಮಹಾಮಾಯೂರೀ, ಸರಸ್ವತೀ, ಹಾರೀತೀ, ಪಂಚಿಕಾ ಮುಂತಾದವನ್ನು ವಿಶೇಷವಾಗಿ ಹೆಸರಿಸಬಹುದು. ಈ ವಿಗ್ರಹಗಳು ಒಂಟಿಯಾಗಿಯೊ ಹಲವು ಗುಂಪುಗಳೆಲ್ಲೊ ಇವೆ. ಎಲ್ಲೋರದ ಬೌದ್ಧ ಶಿಲ್ಪಗಳು ಬಹುಮಟ್ಟಿಗೆ ಬೃಹದ್ಗಾತ್ರದವೇ. ಇವೆಲ್ಲವೂ ಪ್ರ.ಶ. ಸು. 6 ರಿಂದ 8ನೆಯ ಶತಮಾನದ ಮಧ್ಯಭಾಗಕ್ಕೆ ಸೇರಿದವಾದ್ದರಿಂದ ಗುಪ್ತ ಶೈಲಿಯಿಂದ ಪ್ರಭಾವಿತವಾದ ಅಜಂತ ಶಿಲ್ಪಶೈಲಿಯೇ ಇದ್ದರೂ ಅಲ್ಲಲ್ಲಿ ತತ್ಕಾಲೀನ ದಖನೀ ಶಿಲ್ಪಶೈಲಿಯ ಪ್ರಭಾವವೂ ಕಂಡುಬರುತ್ತದೆ. ಅಜಂತ ಶಿಲ್ಪಗಳಿಗಿಂತ ಎಲ್ಲೋರ ಶಿಲ್ಪಗಳು ಸ್ವಲ್ಪ ಕೆಳ ಮಟ್ಟದವೇ ಎಂದು ಹೇಳಬಹುದು. ಶಿಲ್ಪ ವಸ್ತು ಬಹುಮಟ್ಟಿಗೆ ದೇವ ದೇವತೆಗಳಿಗೆ ಸೀಮಿತವಾಗಿದ್ದು, ಬೌದ್ಧಾಗಮಿಕ ಸೂತ್ರಗಳ ಕಟ್ಟಿನೊಳಗೇ ಇರಬೇಕಾಗಿದ್ದು ದರಿಂದ, ಅವುಗಳ ರೂಪಣೆಯಲ್ಲಿ ಶಿಲ್ಪಿಯ ಸ್ವಪ್ರತಿಭೆ ಮತ್ತು ವಿವಿಧ ರಸಭಾವ ನಿರೂಪಣೆಗಳಿಗೆ ಅಷ್ಟಾಗಿ ಅವಕಾಶವೊದಗಿಲ್ಲ. ಮೂರ್ತಿಗಳೆಲ್ಲ ಶಾಂತ, ಗಂಭೀರ ಮುಖ ಮುದ್ರೆಯಲ್ಲಿದ್ದು, ಇವುಗಳಲ್ಲಿ ಒಂದು ರೀತಿಯ ಅಸಹಜ ಏಕರೂಪತೆ ಕಾಣಿಸಿಕೊಂಡಿದೆ. ಆದರೂ ಆಗಮಸೂತ್ರಗಳ ಕಟ್ಟಿನಿಂದ ಹೊರತಾದ ಕೆಲವು ಉಪವಿಗ್ರಹಗಳ ರೂಪಣೆ ಮತ್ತು ಅಲಂಕರಣಗಳಲ್ಲಿ ಶಿಲ್ಪಿಯ ಜಾಣ್ಮೆಯನ್ನು ಕಾಣಬಹುದಾಗಿದೆ. 

10ನೆಯ (ವಿಶ್ವಕರ್ಮ) ಗುಹೆಯಲ್ಲಿ ಸ್ತೂಪದ ಮೇಲೆ ಕೆತ್ತಿರುವ ಬುದ್ಧ ವಿಗ್ರಹ ಎಲ್ಲೋರ ಬೌದ್ಧಶಿಲ್ಪಕ್ಕೆ ಉತ್ತಮ ಉದಾಹರಣೆ. ಸಿಂಹಾಸನದ ಮೇಲೆ ಪ್ರಲಂಬ ಪಾದನಾಗಿ ಕುಳಿತಿರುವ ಬುದ್ಧನ ಈ ಮೂರ್ತಿ ಧರ್ಮಚಕ್ರ ಪ್ರವರ್ತನವನ್ನು ಪ್ರತೀಕರಿಸುತ್ತದೆ. ಮೂರ್ತಿ ಅಂತರ್ಮುಖಯಾಗಿ ತೋರಿಸಲ್ಪಟ್ಟಿದ್ದರೂ ಅಜಂತ ಮತ್ತಿತರೆಡೆಯಲ್ಲಿರುವ ಇದೇ ರೀತಿಯ ಮೂರ್ತಿಗಳಲ್ಲಿರುವ ಸಾತ್ತ್ವಿಕ ಗಾಂಭೀರ್ಯ ಇಲ್ಲಿ ಎದ್ದು ಕಾಣುವುದಿಲ್ಲ. ನಿರೂಪಣದಲ್ಲಿ ಗಾತ್ರವಷ್ಟೇ ಪ್ರಧಾನವಾಗಿ ಕಾಣುತ್ತದೆ. ಆದರೆ ಪಕ್ಕದ ಅನುಚರ ವಿಗ್ರಹಗಳು ಇದಕ್ಕಿಂತಲೂ ಉತ್ತಮವಾಗಿವೆ. ಮೇಲಿನ ಗಂಧರ್ವ ಭಕ್ತರ ಶಿಲ್ಪಗಳು ಚಿಕ್ಕವಾಗಿದ್ದರೂ ಸಂದರ್ಭೋಚಿತವಾಗಿ ಭಕ್ತಿಭಾವ ಪುರಿತವಾಗಿದೆ. ಇಲ್ಲಿನ ಬೌದ್ಧಶಿಲ್ಪಗಲ್ಲಿ ಕಂಡುಬರುವ ವಿಭಿನ್ನ ಭಾವಗಳ ಅಭಾವಕ್ಕೆ  12ನೆಯ ಗುಹೆಯಲ್ಲಿರುವ ಬುದ್ಧ ವಿಗ್ರಹಗಳ ಸಾಲನ್ನು ಉದಾಹರಿಸಬಹುದು. ಮೂರ್ತಿರಚನೆಯಲ್ಲಿ ಅಂಗಾಂಗಗಳ ಸಹಜ ಪ್ರಮಾಣವನ್ನು ಅನುಸರಿಸಿ ಸ್ವಲ್ಪ ಮಾತ್ರ ಅಲಂಕರಣದಿಂದ ಉತ್ತಮ ಶಿಲ್ಪಗಳನ್ನು ಸಮಕಾಲೀನ ಶಿಲ್ಪಿ ರೂಪಿಸಬಲ್ಲವನಾಗಿದ್ದ ನೆಂಬುದನ್ನು ಅದೇ 12ನೆಯ ಗುಹೆಯಲ್ಲಿರುವ ದ್ವಾರಪಾಲಕ ವಜ್ರ ಪಾಣಿಯ ಮೂರ್ತಿಯಲಿ ಕಾಣಬಹುದು. ಹಾಗೆಯೇ ಅದೇ 12ನೆಯ ಗುಹೆಯಲ್ಲಿರುವ ಪ್ರಜ್ಞಾಪಾರಮಿಕ, 6ನೆಯ ಗುಹೆಯಲ್ಲಿರುವ ಮಹಾಮಾಯೂರಿಯೂ ಒಳ್ಳೆಯ ಶಿಲ್ಪಗಳು.

ಬೌದ್ಧ ಗುಹೆಗಳಿಂದ ಹಿಂದೂ ಗುಹೆಗಳಿಗೆ ಬಂದರೆ ಒಂದು ಹೊಸ ವಾತಾವರಣವನ್ನು ಹೊಕ್ಕಂತಾಗುತ್ತದೆ. ಅಲ್ಲಿನಂತೆ ಬೃಹದ್ ಶಿಲ್ಪಗಳೇ ವಿಶೇಷವಾಗಿವೆ. ಗುಹೆಗಳ ಭಿತ್ತಿಗಳಲ್ಲಿ ಒಂದೊಂದು ಶಿಲ್ಪವೂ ನೆಲದಿಂದ ಮೇಲಿನವರೆಗೆ ಎಂಟು ಹತ್ತು ಅಡಿಗಳ ಎತ್ತರ ಹಬ್ಬಿ ಎರಡು ಪಕ್ಕಗಳಲ್ಲೂ ಗೋಡೆಯಿಂದ ಹೊರಬರುವ ಅರೆಗಂಬ (ಪಿಲಾಸ್ಟರ್)ಗಳಿಂದ ಸೀಮಿತಗೊಂಡು ದೊಡ್ಡ ಪಟ್ಟಿಕೆಗಳ (ಪ್ಯಾನಲ್) ರೀತಿಯಲ್ಲಿರುತ್ತದೆ. ಕೈಲಾಸ ದೇವಾಲಯದಲ್ಲಿ ಗೋಡೆಗಳಲ್ಲಿರುವ ವಿಶಾಲವಾದ ಕೋಷ್ಠಗಳು ಶಿಲ್ಪಗಳಿಗೆ ಉಪಯೋಗಿಸಲ್ಪಟ್ಟಿವೆ. ಪುರಾಣಗಳಿಂದ ಆರಿಸಿದ ನರಸಿಂಹಾವತಾರ, ತ್ರಿವಿಕ್ರಮಾವತಾರ, ವರಾಹಾವತಾರ, ಅಂಧಕಾಸುರ ಮರ್ದನ,  ಗಜಾಸುರ ಮರ್ದನ, ತ್ರಿಪುರ ದಹನ, ಗಿರಿಜಾಕಲ್ಯಾಣ ಮುಂತಾದ ವೈಷ್ಣವ ಶೈವ ಕಥೆಗಳೇ ಈ ಶಿಲ್ಪಗಳ ಮುಖ್ಯವಸ್ತುಗಳು. ಇವುಗಳ ನಿರೂಪಣೆಯಲ್ಲಿ ಒಂದು ಮುಖ್ಯ ಮೂರ್ತಿಯನ್ನು ದೊಡ್ಡದಾಗಿ ಅದರ ಸಂಬಂಧದ ಇತರ ಮೂರ್ತಿಗಳನ್ನು ಸ್ವಲ್ಪ ಚಿಕ್ಕದಾಗಿ ಕೆತ್ತಿದ್ದರೂ ಅದರದರ ಸಂದರ್ಭ ಸಹಜಭಾವದೊಡನೆ ಪ್ರಭಾವಪುರ್ಣವಾಗಿ ವ್ಯಕ್ತಗೊಂಡಿದ್ದು ಒಂದೊಂದು ಶಿಲ್ಪವೂ ನಾಟಕದ ಸ್ತಬ್ಧದೃಶ್ಯದಂತೆ (ಟ್ಯಾಬ್ಲೋ) ಭಾಸವಾಗುತ್ತದೆ. ವಿಶಾಲವಾದ ಎದೆ, ತುಂಬಿದ ದೇಹ, ನೀಳವಾದ ಆದರೂ ಭಾರ ಮತ್ತು ಸೌಷ್ಠವತೆಯಿಂದ ಕೂಡಿದ ಅಂಗಾಂಗಗಳು, ಅಸೀಮ ಶಕ್ತಿಯನ್ನು ವ್ಯಕ್ತಪಡಿಸುವ ಮುಖಚರ್ಯೆ ಮತ್ತು ಅಂಗಭಂಗಿಗಳು ಎಲ್ಲೋರದ ಹಿಂದೂ ಶಿಲ್ಪದ ವೈಶಿಷ್ಟ್ಯ. ಈ ಶಿಲ್ಪಗಳಲ್ಲಿ ಅಲಂಕರಣಕ್ಕಿಂತ ಭಾವನಿರೂಪಣೆಯೇ ಪ್ರಧಾನ. ಪುರಾಣಗಳಿಂದ ಆಯ್ದ ಕಥೆಗಳೇ ಶಿಲ್ಪವಸ್ತುವಾದ್ದರಿಂದ, ಶಿಲ್ಪದಲ್ಲಿ ವಿವಿಧ ರಸಭಾವ ಪ್ರಕಟಣೆಗಿರುವ ಆಗಾಧ ಅವಕಾಶವನ್ನು ಇಲ್ಲಿನ ಶಿಲ್ಪಿಗಳು ಸಾರ್ಥಕಪಡಿಸಿಕೊಂಡಿದ್ದಾರೆ.

ಕೈಲಾಸ ದೇವಾಲಯದಲ್ಲಿರುವ ಗಜಾಸುರಮರ್ದನ ಮೂರ್ತಿ ಇಲ್ಲಿಯ ಒಂದು ಉತ್ತಮ ಶಿಲ್ಪ. ಆವೇಶಪುರಿತನಾದ ಶಿವ ತನ್ನ ಆಗಾದಶಕ್ತಿ, ಕ್ರೋಧವನ್ನೆಲ್ಲ ನೇರವಾಗಿ ಅಸುರನೆಡೆಗೆ ಕಾರುತ್ತ ಭಯಂಕರನಾಗಿದ್ದಾನೆ. ಆದರೆ ಈ ರೌದ್ರತೆಯಿಂದ ಪಕ್ಕದಲ್ಲಿರುವ ಪಾರ್ವತಿ ಬೆದರಿ ಎದೆಯ ಮೇಲೆ ಕೈಯಿಟ್ಟು ಕುಳಿತಿದ್ದರೂ ಪುರ್ತಿಯಾಗಿ ಧೃತಿಗೆಟ್ಟಿಲ್ಲ. ರುದ್ರ ಶಿವನಾಗುವನೆಂಬ ಆತ್ಮವಿಶ್ವಾಸ ಅವಳ ಮುಖದಲ್ಲಿ ಎದ್ದು ಕಾಣುತ್ತಿದೆ. ಪಾರ್ವತಿಯ ಪಕ್ಕದಲ್ಲಿರುವ ಚಾಮರಧಾರಿಯಾದರೊ ಹೆಚ್ಚು ಕಡಿಮೆ ನಿರ್ವಿಕಾರಿ. ಶಿವನ ಲೀಲೆಗಳಲ್ಲಿ ಇಂಥವೆಷ್ಟೊ ಎಂಬ ಭಾವ ಅವನಲ್ಲಿ ಸ್ಪಷ್ಟವಾಗಿದೆ. ಇದೇ ರೀತಿಯಲ್ಲಿ ಅದೇ ಕೈಲಾಸ ದೇವಾಲಯದಲ್ಲಿರುವ ಮಹಿಷಮರ್ದಿನಿ ಶಿಲ್ಪದಲ್ಲಿ ದೇವಿಯ ವೀರಕ್ರೋಧ, ಅಸುರನ ಪ್ರತಿಭಟನೆ, ಪರಾಜಿತರ ಆದರ್ರ್‌ತೆ, ದೇವತೆಗಳ ಆಚ್ಚರಿ, ಸಂತಸ- ಎಲ್ಲವೂ ಪರಿಣಾಮಕಾರಿಯಾಗಿ ರೂಪಿತವಾಗಿರುವುದನ್ನು ಕಾಣಬಹುದು. ಹಾಗೆಯೇ ಅಲ್ಲಿನ ನರಸಿಂಹ ಶಿಲ್ಪದಲ್ಲಿ ನರಸಿಂಹನ ಭಯಂಕರ ಕ್ರೋಧ, ಅಸುರನತ್ತ ತಾತ್ಸಾರ, ಅಸುರನ ಅಸಹಾಯಕ ಸ್ಥಿತಿ, ಪ್ರಾಯಶಃ ಪ್ರಹ್ಲಾದನ ಶರಣಾಗತಿ ಎಲ್ಲವೂ ಮೇಲೆದ್ದು ಕಾಣುತ್ತವೆ. ಉಗ್ರಶಿಲ್ಪಿಗಳನ್ನು ರೂಪಿಸುವುದರಲ್ಲೆ ಎಲ್ಲೋರದ ಶಿಲ್ಪ ಬಹು ಕುಶಲ. ಕಲ್ಯಾಣ ಸುಂದರ, ಮತ್ತಿತರ ಸೌಮ್ಯ ಸಂದರ್ಭಗಳನ್ನು ಕಡೆಯುವುದರಲ್ಲೂ ಶಿಲ್ಪಿಯ ಜಾಣ್ಮೆ ಹೊರ ಹೊಮ್ಮದಿಲ್ಲ. ನಾಲ್ಕಾರು ಗುಹೆಗಳಲ್ಲಿ ಕೈಲಾಸದ ಮೇಲೆ ಶಿವ ಪಾರ್ವತಿಯರು ವಿನೋದಾಸಕ್ತರಾಗಿರುವಂತೆ ಕೆತ್ತಲಾದ ಶಿಲ್ಪಗಳ ಕೆಳಭಾಗದಲ್ಲಿ ಅತಿಸಹನೆಯ ಮೊದ್ದು ನಂದಿಯನ್ನು ಕೀಟಲೆ ಮಾಡುತ್ತ ಹಲವು ಚೆಲ್ಲಾಟಗಳಲ್ಲಿ ಆಸಕ್ತರಾಗಿರುವ ಶಿವಗಣಗಳು ಬಹು ನಗುವನು ತರುತ್ತವೆ. ಎಲ್ಲೋರದ ಸ್ತ್ರೀ ಶಿಲ್ಪ ಬಹು ವಿಶಿಷ್ಟವಾದುದು. ಇವು ಅಷ್ಟಾಗಿ ಪ್ರಧಾನ ಶಿಲ್ಪಗಳಾಗಿ ಕಂಡುಬರದೆ, ಇತರ ಶಿಲ್ಪಗಳೊಡನೆ ಅಳವಡಿಸಲ್ಪಟ್ಟಿದರೂ ಬಹು ಸುಂದರವಾಗಿ ರೂಪಿತವಾಗಿದೆ. ಆಗತಾನೇ ಮಿಂದೆದ್ದು ಬರುತ್ತಿರುವಂತಿರುವ ಯಮುನೆಯ ಒಂದು ಮೋಹಕಶಿಲ್ಪ ಸೀತಾ-ಕಾ-ನಾನಿ ಗುಹೆಯಲ್ಲಿದೆ. ಸುಮಾರು ಅದೇ ರೀತಿಯ ಗಂಗೆಯ ಶಿಲ್ಪವೊಂದು ರಾಮೇಶ್ವರ ಗುಹೆಯಲ್ಲಿದೆ.

ಎಲ್ಲೋರ ಜೈನ ಗುಹೆಗಳಲ್ಲಿ ಕಾಣುವ ಶಿಲ್ಪಗಳ ವಸ್ತು ಬೌದ್ಧ ಗುಹೆಗಳಲ್ಲಿನಂತೆಯೆ ದೇವದೇವತೆಗಳ ವಿಗ್ರಹಗಳಿಗೆ ಸೀಮಿತವಾದುದು. ಅನೇಕ ತೀರ್ಥಂಕರರು, ಯಕ್ಷ-ಯಕ್ಷಿಯರು, ಗೊಮ್ಮಟ ಮುಂತಾದ ಮೂರ್ತಿಗಳು ಇಲ್ಲಿವೆ. ಕಾಲದಲ್ಲಿ ಇವು ಹಿಂದೂ ಶಿಲ್ಪಗಳಿಗಿಂತ ಸ್ವಲ್ಪ ಈಚಿನವು. ಈ ಶಿಲ್ಪಗಳು ಪ್ರಮಾಣ, ರೀತಿ ಮುಂತಾದವುಗಳಲ್ಲಿ ಹಿಂದೂ ಶಿಲ್ಪಗಳನ್ನೇ ಅನುಕರಿಸಿವೆ. ಆದರೆ ಶಿಲ್ಪ ವಸ್ತು ಶಾಸ್ತ್ರದ ಕಟ್ಟಿನಿಂದ ಸೀಮಿತವಾಗಿರುವುದರಿಂದ ವಿವಿಧ ಭಾವನಿರೂಪಣೆಗೆ ಅಷ್ಟಾಗಿ ಅವಕಾಶವೊದಗಿಲ್ಲ. ಬೌದ್ಧಶಿಲ್ಪಗಳಂತೆ ಇಲ್ಲೂ ತದೇಕ ಸೌಮ್ಯ-ಗಂಭೀರ ಭಾವವಷ್ಟೆ ಪ್ರಕಟಗೊಂಡಿದೆ. ಆದರೆ ಈ ಕುಂದನ್ನು ಶಿಲ್ಪಿ ಹೆಚ್ಚಿನ ಅಲಂಕರಣವನ್ನು ಒದಗಿಸುವುದರಲ್ಲಿ ಭಾಗಶಃ ನಿವಾರಿಸಿಕೊಂಡಿದ್ದಾನೆ. ಆದರೆ ಈ ಅಲಂಕರಣವೇ ಶಿಲ್ಪದ ವೈಭವವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆಯೇನೋ ಎನ್ನಿಸುತ್ತದೆ. ಜೈನ ಶಿಲ್ಪಕ್ಕೆ 32ನೆಯ ಗುಹೆಯಲ್ಲಿರುವ ಗೊಮ್ಮಟೇಶ್ವರ ಮತ್ತು ಸಿದ್ಧೈಕಿಯ ಮೂರ್ತಿಗಳು ಒಳ್ಳೆಯ ಉದಾಹರಣೆಗಳು. (ಎಸ್.ಎನ್.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ